ಕೋಳಿ ಅಂಕ

ಆರಿಸಿ, ಸಾಕಿ, ಕಾಳಗಕ್ಕೆಂದೇ ತಯಾರಿ ಕೊಟ್ಟ ಎರಡು ಹುಂಜಗಳ ನಡುವೆ ಸ್ಪರ್ಧೆಯನ್ನು ಏರ್ಪಡಿಸಿ ಅವುಗಳ ಸೆಣಸಾಟವನ್ನೂ ಸೋಲು ಗೆಲುವುಗಳನ್ನೂ ನೋಡಿ ನಲಿಯುವ ಒಂದು ಜನಪದ ಮನೋರಂಜನ ಕಾರ್ಯಕ್ರಮ ಇದನ್ನು ಕೋಳಿ ಕಾಳಗ, ಕೋಳೆ ಕಟ್ಟ ಎಂದೂ ಕರೆವುದಿದೆ. ಒಂದು ಕಾಲದಲ್ಲಿ ಕನ್ನಡ ದೇಶದ ಅನೇಕ ಕಡೆ ಇದು ಪ್ರಚಲಿತವಿತ್ತಾದರೂ ಸದ್ಯಕ್ಕೆ ತುಳುನಾಡಿನಲ್ಲಿ ಮಾತ್ರ ಇದು ಜನಪ್ರಿಯವಾಗಿ ಉಳಿದು ಬಂದಿದೆ. ಈ ಹವ್ಯಾಸಕ್ಕೆ ಸಾಕಷ್ಟು ಪ್ರಾಚೀನವಾದ ಪರಂಪರೆ ಇರುವಂತೆ ತೋರುತ್ತದೆ. ಕೋಳಿ ಸಾಕಣೆಯ ಪ್ರಚಾರ ಕಾರ್ಯ ಪ್ರಾರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಅದರ ಮಹತ್ತ್ವವನ್ನು ಸಮಾಜದ ಮುಖಂಡರು ಅರಿತ್ತಿದ್ದರು ಎನ್ನುವುದು ನಿರ್ವಿವಾದವಾದ ವಿಚಾರ. ಸುಮಾರು ಕ್ರಿಸ್ತಶಕದ ಆರಂಭದಲ್ಲಿ ರಚಿಸಲ್ಪಟ್ಟ ವಾತ್ಸ್ಯಾಯನನ ಕಾಮಸೂತ್ರದಲ್ಲಿ ಕಲೆಗಳ ವಿಚಾರ ಹೇಳುವಾಗ ಕುಕ್ಕುಟ ಕಾಳಗದ ಪ್ರಸ್ತಾಪ ಮಾಡಲಾಗಿದೆಯಲ್ಲದೆ ಸಾಮಾನ್ಯ ಜನ ಅವುಗಳ ಮೇಲೆ ಪಣಕಟ್ಟುತ್ತಿದ್ದರು ಎಂಬ ವಿಷಯವೂ ಉಕ್ತವಾಗಿದೆ. ವರಾಹಮಿಹಿರನ ಬೃಹತ್ ಸಂಹಿತೆಯ 53ನೆಯ ಅಧ್ಯಾಯನದಲ್ಲಿ ಕುಕ್ಕುಟ ಲಕ್ಷಣದ ವಿಚಾರವಲ್ಲದೆ ಹುಂಜಗಳ ಕಾಳಗ ಆಗಿನ ಒಂದು ಮನೋರಂಜನೆಯ ಆಟವಾಗಿತ್ತೆಂಬ ವಿಷಯವೂ ಇದೆ.

	ಕೋಳಿ ಅಂಕಗಳನ್ನು ಜನ ಯಾವ ಉದ್ದೇಶದಿಂದ ಪ್ರಾರಂಭಿಸಿದರು ಎಂಬು ನಿಶ್ಚಯವಾಗಿ ಹೇಳಲು ಸಾಧ್ಯವಿಲ್ಲ. ಪ್ರಾಣಿ ಪ್ರಾಣಿಗಳ ನಡುವೆ, ಮನುಷ್ಯ ಪ್ರಾಣಿಗಳ ನಡುವೆ ಕಾಳಗವನ್ನೇರ್ಪಡಿಸಿ ನೋಡುವ ಹವ್ಯಾಸ ಸಾಕಷ್ಟು ಹಳೆಯದು. ರಾಜ ಮಹಾರಾಜರೂ ಜನರೂ ಹಿಂದಿನಿಂದ ಈ ಬಗ್ಗೆ ಆಸ್ಥೆ ತೋರಿಸುತ್ತ ಬಂದಿದ್ದಾರೆ. ಒಳ್ಳೆಯ ತಳಿಯ ಪ್ರಾಣಿಗಳನ್ನು ಸಾಕಲು ಇಂಥ ಕಾಳಗಗಳಿಂದ ಉತ್ಸಾಹ, ಪ್ರೋತ್ಸಾಹ ಸಾಕಷ್ಟು ಸಿಗುತ್ತಿತ್ತೆಂದೂ ಊಹಿಸಬಹುದು.

	ಕುದುರೆಯ ಓಟದ ಪಂದ್ಯಾಟ ಕ್ರಮೇಣ ಕುದುರೆಯ ಜೂಜು ಆದಂತೆ ಕೋಳಿಯ ಅಂಕ ಕ್ರಮೇಣ ಕೋಳಿಯ ಜೂಜು ಆಯಿತೆನ್ನಬಹುದು. ಪಂದ್ಯದ ಹಕ್ಕಿಗಳ ಮೇಲೆ ಪಣಕಟ್ಟುವ ವಿಷಯ ವಾತ್ಸಾಯನನ ಬರಹಗಳಲ್ಲಿ ಬಂದಿದೆ.

	ಕೋಳಿ ಅಂಕ ಹೆಚ್ಚಾಗಿ ಹಬ್ಬ, ಜಾತ್ರೆ, ನೇಮ, ಕಂಬಳ ಇತ್ಯಾದಿಗಳು ಕಳೆದ ಕೂಡಲೇ ಜರುಗುವುದು ಸಂಪ್ರದಾಯ. ವಾಡಿಕೆಯಾಗಿದ್ದು ಮೂರು ಅಥವಾ ಐದು ದಿನ ನಡೆಯುತ್ತದೆ. ಸುಮಾರಾಗಿ ಮಧ್ಯಾಹ್ನದಿಂದ ಮಧ್ಯರಾತ್ರಿಯ ತನಕ ನಡೆಯುವ ಕೋಳಿ ಅಂಕದ ಸ್ಥಳ ಸಾಮಾನ್ಯವಾಗಿ ವಿಶಾಲವಾದ ಬಯಲು ಇಲ್ಲವೆ ಬೆಳೆ ಕೊಯ್ದ ಗದ್ದೆ. ಈ ಕಾರ್ಯಕ್ರಮಕ್ಕೆ ಹೆಚ್ಚಾಗಿ ಆಹ್ವಾನ ಅಥವಾ ಪ್ರಚಾರದ ಅವಶ್ಯಕತೆ ಇಲ್ಲವಾದರೂ ವಿಶೇಷ ಸಂದರ್ಭಗಳಲ್ಲಿ ಕರಪತ್ರಗಳ ಹಂಚಿಕೆ ಕೂಡ ಜರಗುತ್ತದೆ.

	ಕಾಳಗದ ಹಕ್ಕಿಯ ಜಾತಿಗಳು : ಹುಂಜಗಳ ವರ್ಗೀಕರಣದಲ್ಲಿ ಅವುಗಳ ಬಣ್ಣಕ್ಕೇ ಪ್ರಾಧಾನ್ಯ. ಬೊಳ್ಳೆ, ಕರ್ಬೊಳ್ಳೆ, ಕೆಂಪೆ, ಮಂಜಲೆ, ಪಂಚಣಿ, ಕಕ್ಕೆ, ನೀಲೆ, ಕುಪ್ಪುಳ, ಗರುಡುಬೂದಿ, ಕರಿನೀಲ, ಕೆಮ್ಮೈರ, ಗಿಡಿಯ(ಕಪ್ಪು, ಕೆಂಪು, ಬಿಳಿ, ಕೆಮ್ಮೈರ ಬೂದಿ), ಮೈಪ್ಪ(ಬಿಳಿ, ಕಪ್ಪು ಹಳದಿ), ಉರಿಯ(ಕಪ್ಪು ಕೆಂಪು), ಬೂದಿ, ಕಾವೆ(ಗರುಡ, ಕೆಂಪು, ಕಪ್ಪು) ಪಂಬದ(ಕಾಲಿನಲ್ಲಿ ಗರಿ ಇರುವುದು), ಗಡ್ಡಮೆ(ಗಡ್ಡದಲ್ಲಿ ಗರಿ ಇರುವುದು), ಕೊಟ್ಟುಚಾಲೆ(ಜುಟ್ಟಿನ ಬುಡದಲ್ಲಿ ಕೆಲವು ಗರಿಗಳು ಎತ್ತರಕ್ಕಿರುವುದು)-ಮೊದಲಾದ ನಾನಾ ಪ್ರಭೇದಗಳಿವೆ. ದೊಡ್ಡ ಜಾತಿಯ ಹುಂಜಗಳನ್ನು ಪೈಕಾ ಎಂದೂ ಸಣ್ಣ ಜಾತಿಯವನ್ನು ಜೀಕಾ ಎಂದು ಕರೆಯುತ್ತಾರೆ. ಹುಂಜಗಳ ಗರಿಗಳ ಆಕಾರಕ್ಕನುಗುಣವಾಗಿ ಮುಖ್ಯವಾಗಿ ಜಳ್ಳಿ ಮತ್ತು ಪೆರಡಿಂಗ ಎಂಬ ಎರಡು ವರ್ಗಗಳಿವೆ. ಜಳ್ಳಿಯ ಗರಿಗಳು ಉದ್ದವಾಗಿ ಮೊನಚಾಗಿರುತ್ತವೆ. ಪೆರಡಿಂಗದ ಗರಿಗಳು ಹೇಂಟೆಯ ಗರಿಗಳಂತೆ ಉರುಟಾಗಿರುತ್ತದೆ.

	ಹುಂಜಗಳ ಜುಟ್ಟು : ಆಕಾರಕ್ಕನುಸಾರವಾಗಿ ಹುಂಜಗಳ ಜುಟ್ಟುಗಳಿಗೆ ಬೇರೆ ಬೇರೆ ಹೆಸರುಗಳಿವೆ. ಹಾಗಲಕಾಯಿ ಜುಟ್ಟು, ಎಲೆಜುಟ್ಟು, ಸಹಸ್ರಜುಟ್ಟು ಸುತ್ತಿಗೆ (ಮುಂಡಾಸು) ಜುಟ್ಟು, ರೂಪಾಯಿಜುಟ್ಟು ಮೊದಲಾದ ಕೆಲವನ್ನು ಇಲ್ಲಿ ಹೆಸರಿಸಬಹುದು.

	ಹುಂಜದ ಒಡೆಯ ತನ್ನ ಹಕ್ಕಿಯನ್ನು ಅಂಕಕ್ಕೆ ಹಿಡಿದುಕೊಂಡು ಬರುವಾಗ, ಮನೆ ಮಕ್ಕಳು ಅಗತ್ಯದ ಸಾಮಗ್ರಿ ಸಮೇತರಾಗಿ ಅವನನ್ನು ಹಿಂಬಾಲಿಸುತ್ತಾರೆ. ಒಂದು ಕಾಲಕ್ಕೆ ಹಕ್ಕಿಗಳ ಸಂಖ್ಯೆ ಜಾಸ್ತಿ ಇದ್ದಾಗ ಶ್ರೀಮಂತರು ಕಾವಡಿ (ಬೆತ್ತದ ದೊಡ್ಡ ಕುಕ್ಕೆ) ಅಥವಾ ಗಾಡಿಗಳಲ್ಲಿ ಅವನ್ನು ಸಾಗಿಸುತ್ತಿದ್ದರು. ಊರಿನ ಮುಖಂಡರು ಅಂಕಕ್ಕೆ ಬಂದ ಹುಂಜಗಳನ್ನು ಅವಲೋಕಿಸಿ, ಜಾತಿ ಮತ್ತು ಬಣ್ಣಕ್ಕನುಸಾರವಾಗಿ, ವೃತ್ತಾಕಾರವಾಗಿ, ಬಯಲಲ್ಲಿ ಅವನ್ನು ಕಟ್ಟುವ ಪದ್ಧತಿ ಇತ್ತು. 

	ಕಾಳಗಕ್ಕೆ ಸಿದ್ಧವಾಗುವಂತೆ ಸಮಗಾತ್ರದ ಎರಡು ಹುಂಜಗಳನ್ನು ಅವುಗಳ ಒಡೆಯರು ಕೆರಳಿಸಿ, ಒಂದರ ಮೇಲೊಂದನ್ನು ಛೂ ಬಿಡುತ್ತಾರೆ. ಈ ರೀತಿ ಎರಡೂ ಜಗಳವಾಡುವಾಗ ಅವುಗಳಲ್ಲೊಂದು ಎದುರಾಳಿಯನ್ನು ಹಿಂಗಾಲಿನ ಹೊಡೆತದಿಂದ ತತ್ತರಿಸುವಂತೆ ಮಾಡುತ್ತದೆ. ಜಗಳವಾಡುತ್ತ ಕೆಲವು ಅಂಕದ ಸ್ಥಳದಿಂದ ಓಡುತ್ತವೆ. ಅವುಗಳಲ್ಲಿ ಕೆಲವು ತಿರುಗಿ ಬಂದು ಪುನಃ ಕಾಳಗವಾಡುತ್ತವೆ. ಅಖೈರಾಗಿ ಓಡಿಹೋದ ಹಕ್ಕಿ ಸೋತಂತೆಯೆ.

	ಈಗ ಹುಂಜದ ಕಾಲಿಗೆ ಬಾಳು(ಮೊನಚಾದ ಉಕ್ಕಿನ ಕತ್ತಿ) ಕಟ್ಟಿಯೇ ಕಾಳಗವಾಡಿಸುತ್ತಾರೆ. ದಕ್ಷಿಣಕನ್ನಡದಲ್ಲಿ ಈ ರೀತಿ ಹಿಂಸಾರೂಪವಾದ ಕಾಳಗ ಜೈನರ ಆಳ್ವಿಕೆ ಅಂತ್ಯವಾದ ಬಳಿಕ ಪ್ರಾರಂಭವಾಯಿತು ಎಂದು ಹೇಳುತ್ತಾರೆ. ಏನಿದ್ದರೂ ಈಗ ಬಾಳು ಇಲ್ಲದ ಕೋಳಿ ಅಂಕವಿಲ್ಲ. ಹಕ್ಕಿಗಳ ಗಾತ್ರಕ್ಕನುಸಾರವಾಗಿ ಅವುಗಳ ಬಾಳಿನ ಗಾತ್ರವೂ ವ್ಯತ್ಯಾಸವಾಗುತ್ತದೆ, ಆಕಾರವೂ ಭಿನ್ನವಾಗುತ್ತದೆ. ಬಾಳಿನಲ್ಲಿ ಮುಖ್ಯವಾಗಿ ಬಡೆಕ್ಕಾಯಿ ಬಾಳ್(ಉತ್ತರದ ಬಾಳು) ಮತ್ತು ತೆನ್ಕಾಯಿ ಬಾಳ್ ಅಥವಾ ಊರಬಾಳ್(ದಕ್ಷಿಣದ ಬಾಳು) ಎಂದು ಎರಡು ಬಗೆ. ಅಂಕುಡೊಂಕಾಗಿರುವ ನಾಗರಕಿರ್ಸ ಮತ್ತು ತುದಿ ಸ್ವಲ್ಪ ಕೊಕ್ಕೆಯಾಗಿರುವ ಇಟ್ಟಿಮುಳ್ಳು ಇವು ಇತರ ಎರಡು ಬಾಳುಗಳು. ಹಕ್ಕಿಯ ಕಾಲಿಗೆ ಬಾಳುಕಟ್ಟುವುದರಲ್ಲಿಯೂ ಪರಿಣಿತರಾದವರು ಕೆಲವರಿರುತ್ತಾರೆ. ಅದಕ್ಕೆ ಉಪಯೋಗಿಸುವ ದೋರೆಯು(ದಾರ) ವಿಶೇಷ ರೀತಿಯದು. ಬಲಗಾಲಿನ ಹೆಬ್ಬೆರಳಿನ ಬಳಿ ಯಾವಾಗಲೂ ಹಿಮ್ಮುಖವಾಗಿ ಬಾಳನ್ನು ಕಟ್ಟುತ್ತಾರೆ. ಬಡೆಕ್ಕಾಯಿ ಬಾಳಿಗೆ ಅರಿವೆ ಸುತ್ತಿ, ದೋರೆ ಕಟ್ಟುತ್ತಾರೆ. ಊರಬಾಳಿಗೆ ಅರಿವೆ ಅಗತ್ಯವಿಲ್ಲ. ಬಾಳುಗಳನ್ನು ಇಡುವ ಚೀಲವೇ ಬಾಳಸೂಡಿ. 

	ಯಾವಾಗಲೂ ಸಮಜೋಡಿಗಳನ್ನೇ ಕಾಳಗಕ್ಕೆ ಬಿಡುತ್ತಾರೆ. ಅವು ಗರಿಕೆದರಿಸಿ, ಬಾಲ ಹಾರಿಸಿ, ಬಹಳ ಹುಮ್ಮಸ್ಸಿನಿಂದ ಕಾದಾಡುತ್ತವೆ. ತಮ್ಮ ಕಾಲಕತ್ತಿಯಿಂದ ಎದುರಾಳಿಯನ್ನು ಸದೆಬಡಿಯಲು ಅವು ಸೆಣಸುತ್ತವೆ. ಎರಡರಲ್ಲಿ ಯಾವುದೂ ಸಣ್ಣಪುಟ್ಟ ಗಾಯ ನೋವುಗಳಿಂದ ಹಿಂಜರಿಯುವುದಿಲ್ಲ. 

	ತೀವ್ರ ಪೆಟ್ಟಾದಾಗ ಅಂಕದಲ್ಲಿರುವ ಪರಿಣಿತ ಚಿಕಿತ್ಸಕರು ಗಾಯಗಳನ್ನು ಹೊಲಿದು ಔಷಧಿ ಹಾಕುತ್ತಾರೆ. ನಾನಾ ವಿಧದ ಶುಶ್ರೂಷೆಗಳು ಜರುಗುತ್ತವೆ. ಇದರಿಂದ ಚೇತರಿಸಿಕೊಂಡ ಹಕ್ಕಿ ಪುನಃ ಎದುರಾಳಿಯ ಮೇಲೆ ಎರಗುವುದೂ ಉಂಟು. 

	ಕುಕ್ಕುಟ ಪಂಚಾಂಗ: ಅಂಕದ ಹಕ್ಕಿಗಳ ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯ, ಮರಣ ಮೊದಲಾದ ಲಕ್ಷಣಗಳನ್ನೊಳಗೊಂಡ ಪುಸ್ತಕವಿದು. ಇದು ಕೋಳಿಕಟ್ಟುವವರಿಗೆ ಉಪಯುಕ್ತವಾದ ಒಂದು ಕೈಪಿಡಿ. ಯಾವ ಬಣ್ಣದ ಕೋಳಿ ಮತ್ತಾವ ನಿರ್ದಿಷ್ಟ ಬಣ್ಣದ ಕೋಳಿಯನ್ನು ಯಾವ ವಾರ ಅಥವಾ ತಿಥಿಯಲ್ಲಿ ಗೆಲ್ಲುತ್ತದೆಂದು ಇದರಲ್ಲಿ ಬರೆದಿರುತ್ತದೆ. ಈಗಲೂ ಇಂಥ ಪಂಚಾಂಗಗಳ ಬಳಕೆ ಉಂಟಾದರೂ ಇದರ ಸತ್ಯಾಸತ್ಯಗಳ ವಿಷಯ ಮಾತ್ರ ಚರ್ಚಾಸ್ಪದವಾಗಿದೆ. 

	ಕೋಳಿ ಪಂದ್ಯದಲ್ಲಿ ಸಮ ಮತ್ತು ಓಡಿ ಎಂದು ಎರಡು ಬಗೆ. ಸಮಕಾಳಗದಲ್ಲಿ ಬಿಟ್ಟ ಎರಡು ಹಕ್ಕಿಗಳಲ್ಲಿ ಯಾವುದಾದರೊಂದು ಸತ್ತರೆ ಅಥವಾ ಸೋತು ಓಡಿಹೋದರೆ, ಅದು ಗೆದ್ದ ಹಕ್ಕಿಯವನಿಗೆ ದಕ್ಕುತ್ತದೆ. ಕಾಳಗದಲ್ಲಿ ಸತ್ತರೆ ಮಾತ್ರ ಅದು ಗೆದ್ದ ಹಕ್ಕಿಯವನಿಗೆ ದೊರೆಯುತ್ತದೆಯೇ ಹೊರತು, ಕೇವಲ ಓಡಿಹೋದರೆ ಅಲ್ಲ. ಓಡಿ ಹೋದ ಅಥವಾ ಸತ್ತ ಕೋಳಿಯನ್ನು ಒಟ್ಟೆ ಎಂದು ಗೆದ್ದುದನ್ನು ಬಂಟ ಎಂದೂ ಕರೆಯುತ್ತಾರೆ. ಸೋಡ್ತಿ ಅಂಕದಲ್ಲಿ ನಿರ್ದಿಷ್ಟ ಸಂಖ್ಯೆಯ ಹಕ್ಕಿಗಳನ್ನು ಕಾಳಗಕ್ಕೆ ಬಿಟ್ಟು ಗೆದ್ದವುಗಳಿಗೆ ಬಹುಮಾನ ಕೊಡುತ್ತಾರೆ. 				 					(ಬಿ.ಎ.ವಿ.ಆರ್.)
										(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ